ತಾಯ್ತನದ ಮಹತ್ವ ಅದನ್ನ ಅನುಭವಿಸಿದವರಿಗೇ ಗೊತ್ತು. ಏಕೆಂದರೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯಲ್ಲಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ಅದರಲ್ಲೂ ಆಹಾರ ಪದ್ಧತಿಗಳಲ್ಲೂ ಸಾಕಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತಮಗೆ ಇಷ್ಟವಿದ್ದರೂ ಇಲ್ಲದಿದ್ದರೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೆ ಹಿತಕರವಾಗಿರುವ ಆಹಾರಗಳನ್ನು ಮಾತ್ರ ಸೇವಿಸಬೇಕಾಗುತ್ತದೆ! ಸಾಮಾನ್ಯವಾಗಿ ಗರ್ಭಿಣಿಯಾಗಿರುವಾಗ ಪ್ರೋಟಿನ್, ವಿಟಮಿನ್ ಯುಕ್ತ ಆಹಾರ ಪದಾರ್ಥವನ್ನು ಸೇವಿಸಲು ಸೂಚಿಸಲಾಗುತ್ತದೆ. ಅದರಲ್ಲಿ ಮೀನು ಕೂಡ ಒಂದು. ಗರ್ಭಿಣಿಯಾಗಿದ್ದಾಗ, ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಹೊಂದಿರುವ ಯಾವುದೇ ಪೌಷ್ಟಿಕಯುಕ್ತ ಮೀನುಗಳನ್ನು ಸೇವಿಸಬಹುದು ಆದರೆ ಹೆಚ್ಚಿನ ಪ್ರಮಾಣದ ಪಾದರಸ (ಮರ್ಕ್ಯುರಿ) ಹೊಂದಿರುವ ಮೀನುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆದ್ದರಿಂದ ನೀವು ಗರ್ಭಿಣಿಯಾಗಿದ್ದಾಗ ಸೇವಿಸಬಹುದಾದ ಮತ್ತು ತಿನ್ನಬಾರದ ಮೀನುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಈ ಲೇಖನದಲ್ಲಿ ಮೀನುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು, ಆರೋಗ್ಯ ದೃಷ್ಟಿಯಿಂದ ಸುರಕ್ಷಿತ ಮತ್ತು ಅಸುರಕ್ಷಿತವಾದ ಮೀನುಗಳ ಬಗ್ಗೆ ತಿಳಿಸುತ್ತಿದ್ದೇವೆ.